ಚಿಕ್ಕಸೂಗೂರು ಬಾವಿಯಲ್ಲಿ ರಾಶಿ ರಾಶಿ ಮೀನುಗಳ ಸಾವು:         
             ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ನಿರ್ಲಕ್ಷ್ಯದ ಆರೋಪ

 ಜಯ ಧ್ವಜ ನ್ಯೂಸ್ , ರಾಯಚೂರು, ಅ.24- ತಾಲೂಕಿನ ಚಿಕ್ಕಸುಗೂರು ಗ್ರಾಮದ ಸಾರ್ವಜನಿಕ ಬಾವಿಯಲ್ಲಿ ರಾಶಿ ರಾಶಿ ಮೀನುಗಳು ಸಾವನ್ನಪ್ಪುತ್ತಿದ್ದು, ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ         ಮೀನುಗಳು ಸಾವನ್ನಪ್ಪಿದ್ದರಿಂದ  ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಪ್ರತಿನಿತ್ಯ ಸುಮಾರು 10 ಚೀಲಗಳಷ್ಟು ಮೀನುಗಳು ಸಾಯುತ್ತಿವೆ ಎನ್ನಲಾಗಿದ್ದು, ಮೀನುಗಳ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಚಿಕ್ಕಸುಗೂರು ಗ್ರಾಮದ ಜನರು ಈ ಬಾವಿಯ ನೀರನ್ನು ನಿತ್ಯದ ಬಳಕೆ ಹಾಗೂ ಮಕ್ಕಳು ಈಜಾಡಲು ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸುತ್ತಿದ್ದರು. ಇದೀಗ ಬಾವಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿರುವುದು ಸಾರ್ವಜನಿಕ ಆರೋಗ್ಯದ ಬಗ್ಗೆಯೂ ಆತಂಕ ಮೂಡಿಸಿದೆ. ಬಾವಿಯ ನೀರಿನ ಗುಣಮಟ್ಟದ ಕುರಿತು ಪರಿಶೀಲನೆ ನಡೆಸಿ, ಮೀನುಗಳ ಸಾವಿಗೆ ಕಾರಣ ಪತ್ತೆಹಚ್ಚಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ದೂರು ನೀಡಿದರೂ ಕ್ರಮವಿಲ್ಲವೆಂಬ ಆರೋಪ: ಬಾವಿಯಲ್ಲಿ ಮೀನುಗಳು ಸಾವನ್ನಪ್ಪುತ್ತಿರುವ ವಿಷಯವನ್ನು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಗಮನಕ್ಕೆ ತಂದಿದ್ದಾರೆ. ಆದರೆ, ಈವರೆಗೆ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಗ್ರಾಮದ ಸಾರ್ವಜನಿಕ ಬಾವಿಯಲ್ಲಿ ಮೀನುಗಳು ಸಾಯುತ್ತಿದ್ದರೂ, ಪಂಚಾಯಿತಿ ಆಡಳಿತವಾಗಲಿ ಅಥವಾ ಸಿಬ್ಬಂದಿಯಾಗಲಿ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಾವಿಯಲ್ಲಿ ಮೀನುಗಳು ಸಾಮೂಹಿಕವಾಗಿ ಸಾವನ್ನಪ್ಪುತ್ತಿರುವುದಕ್ಕೆ ನೀರಿನ ಮಾಲಿನ್ಯವೇ ಕಾರಣವೇ ಅಥವಾ ಬೇರೆ ಯಾವುದಾದರೂ ಅಂಶವಿದೆಯೇ ಎಂಬುದನ್ನು ಸಂಬಂಧಪಟ್ಟ ಇಲಾಖೆಗಳು ವೈಜ್ಞಾನಿಕವಾಗಿ ಪರಿಶೀಲಿಸಬೇಕಿದೆ. ಬಾವಿಯ ನೀರಿನ ಮಾದರಿಯನ್ನು ಪರೀಕ್ಷಿಸಿ, ಸಾರ್ವಜನಿಕ ಆರೋಗ್ಯಕ್ಕೆ ಅಪಾಯವಿದೆಯೇ ಎಂಬುದನ್ನು ಸ್ಪಷ್ಟಪಡಿಸುವುದು ಅಗತ್ಯವಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಗ್ರಾಮ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯದ ಆರೋಪದ ಬಗ್ಗೆಯೂ ಮೇಲಧಿಕಾರಿಗಳು ಗಮನಹರಿಸಬೇಕು. ಗ್ರಾಮಸ್ಥರ ಸಮಸ್ಯೆಗೆ ತಕ್ಷಣ ಸ್ಪಂದಿಸಿ, ಮೀನುಗಳ ಸಾವಿಗೆ ಕಾರಣ ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

Comments

Popular posts from this blog