ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ ಯಶಸ್ವಿಯಾಗಿ ನಡೆಸೋಣ- ಸಚಿವ ಡಾ. ಅಜಯ್ ಸಿಂಗ್
ಜಯ ಧ್ವಜ ನ್ಯೂಸ್ , ರಾಯಚೂರು , ನ. 21- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಗವು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಅಜಯ್ ಸಿಂಗ್ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ರಾಯಚೂರಲ್ಲಿ ನಡೆಯಲಿರುವ ಪತ್ರಕರ್ತರ 41ನೇ ರಾಜ್ಯ ಮಟ್ಟದ ಸಮ್ಮೇಳನದ ಕುರಿತು ಸುದೀರ್ಘ ಚರ್ಚೆ ನಡೆಸಿತು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಮಾತನಾಡಿ, ಈ ಬಾರಿ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನ ರಾಯಚೂರಿನಲ್ಲಿ ನಡೆಯುತ್ತಿರುವುದು ತಮಗೆ ತಿಳಿದಿರುವ ವಿಷಯವಾಗಿದ್ದು ಸಮ್ಮೇಳನ ಡಿಸೆಂಬರ್ ಕೊನೆಯ ವಾರದಲ್ಲಿ ನಡೆಸುವ ಉದ್ದೇಶ ಹೊಂದಿದ್ದು, ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಬೇಕಿದ್ದು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಸಮಿತಿಯ ಭಾಗವಾಗಲಿದ್ದಾರೆ. ಸಮ್ಮೇಳನದ ಯಶಸ್ವಿಗೆ ಎಲ್ಲಾ ಜನಪ್ರತಿನಿಧಿಗಳ ಸಹಕಾರ ಸಹಭಾಗಿತ್ವ ಅತ್ಯಂತ ಅವಶ್ಯಕ. ರಾಜ್ಯದ 31 ಜಿಲ್ಲೆಗಳಿಂದ ಪತ್ರಕರ್ತರು ಸಮ್ಮೇಳನಕ್ಕೆ ಆಗಮಿಸಲಿದ್ದು, ನೀವು ಸಮ್ಮೇಳನದ ನೇತೃತ್ವ ವಹಿಸಬೇಕು ಎಂದು ಸಚಿವರಿಗೆ ಕೋರಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಸಿಂಗ್ ಅವರು ಮಾತನಾಡಿ, ಹಿಂದೆ ಕಲ್ಬುರ್ಗಿಯಲ್ಲಿ ಸಮ್ಮೇಳನ ಬಹಳ ಯಶಸ್ವಿಯಾಗಿ ನಡೆಸಲಾಗಿತ್ತು. ಕಳೆದ ಬಾರಿ ಕೂಡ ಬೀದರ್ ನಲ್ಲಿ ಉತ್ತಮ ರೀತಿಯಲ್ಲಿ ಸಮೇಳನ ನಡೆಸಲಾಗಿದೆ. ಅದೇ ರೀತಿಯಲ್ಲಿ ರಾಯಚೂರಿನಲ್ಲಿ ಕೂಡ ಯಾವುದೇ ರೀತಿಯ ಕೊರತೆ ಬಾರದ ರೀತಿಯಲ್ಲಿ ಅದ್ದೂರಿಯಾಗಿ ಸಮ್ಮೇಳನ ನಡೆಸಿಕೊಡಲು ಜವಾಬ್ದಾರಿ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಶೀಘ್ರದಲ್ಲಿ ರಾಯಚೂರಿಗೆ ಆಗಮಿಸಲಿದ್ದು ಸಮ್ಮೇಳನದ ಯಶಸ್ವಿಗಾಗಿ ಕೈಗೊಳ್ಳಬೇಕಾದ ಸಿದ್ದತೆ ಕುರಿತು ಸಭೆ ನಡೆಸುವುದಾಗಿ ಭರವಸೆ ನೀಡಿದರು. ಸಮ್ಮೇಳನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸುವ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನದಲ್ಲಿಯೇ ಸಮ್ಮೇಳನದ ಲಾಂಛನ ಬಿಡುಗಡೆ ಮಾಡುವ ಕುರಿತು ಸಿಎಂ ಜೊತೆ ಚರ್ಚಿಸುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎನ್.ಎಸ್. ಭೋಸರಾಜು ಮಾತನಾಡಿ, ಸಮ್ಮೇಳನಕ್ಕೆ ಮುಖ್ಯವಾಗಿ ಊಟ , ವಸತಿ ವ್ಯವಸ್ಥೆ ಚೆನ್ನಾಗಿ ಮಾಡಬೇಕು ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಿ. ಹಿಂದೆ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದ ಅನುಭವವಿದ್ದು ಈ ಸಮ್ಮೇಳನ ಯಶಸ್ವಿಗೆ ಅಗತ್ಯ ಮಾರ್ಗದರ್ಶನ ಸಹಕಾರ ನೀಡುವುದಾಗಿ ತಿಳಿಸಿದರು.
ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಮಾತನಾಡಿ ಸಮ್ಮೇಳನಕ್ಕೆ ಬೇಕಾದ ಅಗತ್ಯ ಸಹಕಾರ ನೀಡುವುದಾಗಿ ಈಗಾಗಲೇ ತಿಳಿಸಿದ್ದು ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವುದಾಗಿ ತಿಳಿಸಿದರು.
ಕೆಯುಡ್ಬೂಜೆ ರಾಯಚೂರು ಜಿಲ್ಲಾಧ್ಯಕ್ಷ ಆರ್ ಗುರುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ಕುಕುನೂರ್, ರಾಜ್ಯ ಸಮಿತಿ ಸದಸ್ಯರಾದ ಬಸವರಾಜ್ ನಾಗಡದಿನ್ನಿ, ಅರವಿಂದ್ ಕುಲಕರ್ಣಿ, ಖಜಾಂಚಿ ಮಲ್ಲಿಕಾರ್ಜುನಯ್ಯ ಸೇರಿದಂತೆ ಇತರರು ಇದ್ದರು.


Comments
Post a Comment