ಜಿಲ್ಲಾಡಳಿತದಿಂದ ವೀರರಾಣಿ ಒನಕೆ ಓಬವ್ವ ಜಯಂತಿ ಆಚರಣೆ:

ಓಬವ್ವ ನಮ್ಮೆಲ್ಲರಿಗೂ ಸದಾ ಸ್ಫೂರ್ತಿದಾಯಕ- ಅಪರ ಜಿಲ್ಲಾಧಿಕಾರಿ ಸೋಮಲಿಂಗ 

ಜಯ‌ ಧ್ವಜ ನ್ಯೂಸ್ ,ರಾಯಚೂರು ನ.11-  ಇತಿಹಾಸದ ಪುಟಗಳಲ್ಲಿ ಸಾಹಸ, ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ವೀರರಾಣಿ ಒಣಕೆ ಓಬವ್ವ ನಮ್ಮೆಲ್ಲರಿಗೂ ಸದಾ ಸ್ಫೂರ್ತಿದಾಯಕ ಎಂದು ಅಪರ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗೋಪಾಲ ಗೆಣ್ಣೂರು ಅವರು ಹೇಳಿದರು. 

ಅವರಿಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. 

ಚಿತ್ರದುರ್ಗದ ಮದಕರಿ ನಾಯಕನ ಆಸ್ಥಾನದ ಇತಿಹಾಸವು ನಮ್ಮೆಲ್ಲರಿಗೂ ಸದಾ ಸ್ಫೂರ್ತಿದಾಯಕವಾಗಿದೆ. ಹೈದರಾಲಿ ಸೇನೆಯು ಚಿತ್ರದುರ್ಗದ ಕೋಟೆಯನ್ನು ಭೇದಿಸಲು ಎರಡು-ಮೂರು ಬಾರಿ ಪ್ರಯತ್ನಿಸಿದರೂ ಯಶಸ್ವಿಯಾಗಿರಲಿಲ್ಲ. ಕೊನೆಗೆ ಕಳ್ಳಮಾರ್ಗದಿಂದ ಕೋಟೆಯೊಳಗೆ ನುಗ್ಗಿ ವಿಜಯ ಸಾಧಿಸಲು ಹೈದರಾಲಿ ಮಾಡಿದ ಕುತಂತ್ರವನ್ನು ಓಬವ್ವ ಧೈರ್ಯದಿಂದ ಮೆಟ್ಟಿನಿಂತಳು. ಊಟದ ವೇಳೆ ಕೋಟೆಯ ಕಾವಲುಗಾರ ಮುದ್ದಹನುಮಪ್ಪನಿಗೆ ಕಾವಲು ಕಾಯುವ ಜವಾಬ್ದಾರಿಯಿದ್ದಾಗ, ಒಳಗೆ ನುಗ್ಗುತ್ತಿದ್ದ ಶತ್ರು ಸೈನಿಕರನ್ನು ಒಬ್ಬೊಬ್ಬರಾಗಿ ಒಣಕೆಯಿಂದ ಹೊಡೆದುರುಳಿಸಿ, ಕೋಟೆಯನ್ನು ಮತ್ತು ಸಾಮ್ರಾಜ್ಯವನ್ನು ರಕ್ಷಿಸಿದ ಆಕೆಯ ಸಾಹಸಗಾಥೆ ರೋಮಾಂಚನಕಾರಿಯಾಗಿದೆ ಎಂದರು.


ಒಬ್ಬ ಮಹಿಳೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನಾಡನ್ನು ರಕ್ಷಿಸಿದ ಆ ಶೌರ್ಯವು ಇಂದಿನ ಹೆಣ್ಣುಮಕ್ಕಳಿಗೆ ಧೈರ್ಯ ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದ ಸಂವಿಧಾನವು ಇಂದು ಎಲ್ಲರಿಗೂ ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದು, ಇಂತಹ ವೀರಮಾತೆಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಮಹಿಳೆಯರು ಮುನ್ನಡೆಯಬೇಕಿದೆ ಎಂದರು.

ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿಯೂ ಧೈರ್ಯದಿAದ ಮುನ್ನಡೆಯಬೇಕು. ಮತ್ತು ಕಾನೂನುಗಳು ಹಾಗೂ ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು.ಪ್ರತಿಯೊಬ್ಬ ಹೆಣ್ಣು ಮಗಳೂ ಸಹ ಧೈರ್ಯವನ್ನು 

ಮೈಗೂಡಿಸಿಕೊಂಡು ಸಮಾಜದಲ್ಲಿ ಮುಂಚೂಣಿಗೆ ಬರಬೇಕೆಂದರು

 ರಾಯಚೂರು ತಹಶಿಲ್ದಾರ್ ಸುರೇಶ್ ವರ್ಮಾ ಅವರು ಮಾತನಾಡಿ, ದೇಶ ರಕ್ಷಣೆಗಾಗಿ ಒನಕೆಯನ್ನೇ ಶಸ್ತ್ರವನ್ನಾಗಿಸಿದ ಧೀರ ಮಾತೆ. ವಂಶ ಪರಂಪರೆ ರಾಜಕೀಯದಲ್ಲಿ ರಾಣಿ ಅರ್ಹತೆಯಿಂದ ತರಬೇತಿಯನ್ನು ಪಡೆದು, ವೀರಸೇನೆ ಹಾಗೂ ಎದುರಾಳಿಯ ಸೈನ್ಯವನ್ನು ಮೆಟ್ಟಿಸುವ ಇತಿಹಾಸವನ್ನು ನಾವು ಕಾಣುತ್ತೇವೆ. ಆದರೆ, ಒನಕೆ ಒಬವ್ವ ಯಾವುದೇ ರಾಜಕೀಯದಲ್ಲಿ ಹುಟ್ಟಿಲ್ಲ, ಸೈನ್ಯದ ತರಬೇತಿಯೂ ಇಲ್ಲ, ಶಸ್ತ್ರಾಸ್ತ್ರ ಹಿಡಿಯುವ ಅಭ್ಯಾಸವೂ ಇಲ್ಲ. ಹಂತಹ ಸಾಮಾನ್ಯ ಕುಟುಂಬದಲ್ಲಿ ಬಡತನದಲ್ಲಿರುವ ಮಾತೆ, ದೇಶಕ್ಕೆ ಅವಶ್ಯಕತೆ ಇದ್ದಾಗ ದೇಶದ ರಕ್ಷಣೆ ಮಾಡುತ್ತಾಳೆ ಅನ್ನುವ ಸಂದೇಶವನ್ನು ಜಗತ್ತಿಗೆ ಸಾರಿದವರು ಒನಕೆ ಒಬವ್ವ. ಹಿಂದಿನ ಇತಿಹಾಸ ಕಾಲದಲ್ಲಿ ಒಬ್ಬ ಸ್ತ್ರೀ ತನ್ನ ಗಂಡ ಊಟ ಮಾಡುವ ಸಂದರ್ಭದಲ್ಲಿ, ನಿದ್ರೆ ಮಾಡುವ ಸಂದರ್ಭದಲ್ಲಿ ಯಾವುದೇ ಕೆಟ್ಟ ವಿಷಯಗಳನ್ನು ಹೇಳುವುದಿಲ್ಲ. ಆದರೆ, ಒನಕೆ ಒಬವ್ವ ಅವರು ಅನಿರೀಕ್ಷಿತವಾಗಿ ಒನಕೆಯನ್ನು ಶಸ್ತ್ರವನ್ನಾಗಿ ಬಳಸಿ ಹೈದರಾಲಿ ಸೈನ್ಯವನ್ನು ಎದುರಿಸಿದ ಸಾಹಸ ಅನನ್ಯವಾದುದು. ಮದಕಾರಿ ನಾಯಕನ ಕೋಟೆಯು ಹಲವಾರು ವರ್ಷಗಳಿಂದ ಶ್ರೇಷ್ಠತೆಯಿಂದ ಕೂಡಿತ್ತು. ಅಂತಹ ಕೋಟೆಯನ್ನು ಧ್ವಂಸ ಮಾಡಲು ಹೈದರಾಲಿ ಸೈನ್ಯ ನುಗ್ಗಿ ಕೋಟೆಯನ್ನು ಧ್ವಂಸಗೊಳಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ, ಒನಕೆ ಒಬವ್ವ ತನ್ನ ಪ್ರಾಣವನ್ನು ಲೆಕ್ಕಿಸದೆ ಒಬ್ಬೊಬ್ಬರನ್ನೇ ಒನಕೆಯಿಂದ ಹೊಡೆದುರುಳಿಸಿ ನಾಡನ್ನು ರಕ್ಷಿಸಿದರು.ಇಂತಹ ವೀರ ವನತೆಯ ಆದರ್ಶವನ್ನು ನಾವೆಲ್ಲರೂ ಮೈಗೂಡಿಸಿಕೊಂಡು, ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕಿದೆ ಎಂದರು.

ಉಪನ್ಯಾಪಕರಾಗಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಸಂಯೋಜಕರಾದ ಡಾ.ಶರಣಪ್ಪ ಚಲವಾದಿ ಅವರು ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿಯೂ ಮಹಿಳೆಯರು ತಮ್ಮ ಆತ್ಮಬಿಂಬ, ರಕ್ಷಣೆ ಹಾಗೂ ಧೈರ್ಯಕ್ಕಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ. ಕಷ್ಟದ ಸಂದರ್ಭಗಳಲ್ಲಿ ಎದೆಗುಂದದೆ, ಒನಕೆ ಓಬವ್ವಳಂತಹ ವೀರ ನಾರಿಯರ ಧೈರ್ಯ, ಸಾಹಸ ಹಾಗೂ ಸಮಯ ಪ್ರಜ್ಞೆಯನ್ನು ಇಂದಿನ ಪ್ರತಿಯೊಬ್ಬ ಮಹಿಳೆಯೂ ಮೈಗೂಡಿಸಿಕೊಳ್ಳಬೇಕಿದೆ. ದೇಶ ಮತ್ತು ಸಮಾಜದ ರಕ್ಷಣೆಗಾಗಿ ಧೈರ್ಯದಿಂದ ನಿಲ್ಲುವ ಗುಣವೇ ನಿಜವಾದ ಸ್ತ್ರೀ ಶಕ್ತಿಯ ಪ್ರತೀಕವಾಗಿದೆ ಎಂದರು.

ವಿವಿಧ ಗಣ್ಯರಿಂದ ಮೆರೆವಣಿಗೆಗೆ ಚಾಲನೆ: ವೀರರಾಣಿ ಒನಕೆ ಓಬವ್ವ ಜಯಂತಿ ಅಂಗವಾಗಿ ರಾಯಚೂರು ನಗರದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿ ವೀರರಾಣಿ ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೋಪಾಲ ಗೆಣ್ಣೂರು ಸೇರಿದಂತೆ ವಿವಿಧ ಗಣ್ಯರು, ಸಮಾಜದ ಮುಖಂಡರು ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯು ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗವಾಗಿ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮAದಿರಕ್ಕೆ ಬಂದು ತಲುಪಿತು.

ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ಕಲಾ ತಂಡಗಳನ್ನು ಆಯೋಜನೆ ಮಾಡಲಾಗಿತ್ತು. 

ಇದೇ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಪರಿಸರ ವಿಭಾಗದ ಸಹಾಯಕ ಅಭಿಯಂತರ ಜೈಪಾಲ್ ರೆಡ್ಡಿ, ಸಮಾಜದ ಮುಖಂಡರಾದ ಮಲ್ಲೇಶ ಕೊಲಮಿ, ಲಲಿತಾ , ಜಗನ್ನಾಥ ಸುಂಕಾರಿ,  ಅರ್ಚನಾ ಸುಂಕಾರಿ, ಸಂತೋಷ ನಂದಿ, ಮಾರೆಪ್ಪ, ಎಂ.ವಸಂತ, ದಯಾನಂದ, ಶಿವರಾಜ್, ವಿಶ್ವನಾಥ, ದೇವೇಂದ್ರ ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಇದ್ದರು. 

Comments

Popular posts from this blog