ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿ ವಿದ್ಯಾರ್ಥಿ: ರಾಜ್ಯಮಟ್ಟದ ಯುವ ಸಂಸತ್ಗೆ ರಾಯಚೂರಿನ ಯುವ ಪ್ರತಿಭೆ ಹನುಮಂತ್ರಾಯ ಆಯ್ಕೆ
ಜಯ ಧ್ವಜ ನ್ಯೂಸ್ ,ರಾಯಚೂರು, ನ. 22- ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಅಮೋಘ ಸಾಧನೆಗೈದ ರಾಯಚೂರು ಗ್ರಾಮೀಣ ಕ್ಷೇತ್ರದ ಪ್ರತಿಭಾವಂತ ಯುವಕ ಕು. ಹನುಮಂತ್ರಾಯ (ತಂದೆ: ಶರಣಪ್ಪಗೌಡ) ಅವರು ರಾಜ್ಯಮಟ್ಟದ ಯುವ ಸಂಸತ್ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಸಂಸದೀಯ ಕಲಾಪಗಳ ಕುರಿತ ಆಳವಾದ ಜ್ಞಾನ, ಸಮಕಾಲೀನ ವಿಷಯಗಳ ಮೇಲಿನ ಹಿಡಿತ, ತರ್ಕಬದ್ಧ ವಾದ ಮಂಡನೆ ಹಾಗೂ ಪ್ರಖರ ವಾಕ್ಚಾತುರ್ಯದ ಮೂಲಕ ತೀರ್ಪುಗಾರರ ವಿಶೇಷ ಮೆಚ್ಚುಗೆಗೆ ಪಾತ್ರರಾದ ಹನುಮಂತ್ರಾಯ, ಇದೀಗ ರಾಜ್ಯಮಟ್ಟದ ಪ್ರತಿಷ್ಠಿತ ವೇದಿಕೆಯಲ್ಲಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಅಧಿಕೃತವಾಗಿ ಪ್ರತಿನಿಧಿಸಲಿದ್ದಾರೆ.
ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಹನುಮಂತ್ರಾಯ, ವಿದ್ಯಾರ್ಥಿ ದೆಸೆಯಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನದ ಆಶಯಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳ ಕುರಿತು ವಿಶೇಷ ಒಲವು ಹೊಂದಿದ್ದಾರೆ.
"ಯುವ ಸಂಸತ್ನಂತಹ ವೇದಿಕೆಗಳು ಯುವಜನರಲ್ಲಿ ನಾಯಕತ್ವದ ಗುಣ, ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಸಂಸದೀಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಅತ್ಯಂತ ಪೂರಕವಾಗಿವೆ. ರಾಜ್ಯಮಟ್ಟದ ವೇದಿಕೆಯಲ್ಲಿ ವಿಚಾರ ಮಂಡಿಸುವ ಅವಕಾಶ ಪಡೆದಿರುವ ಹನುಮಂತ್ರಾಯ ಅವರು ವಿಶ್ವವಿದ್ಯಾನಿಲಯ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ," ಎಂದು ರಾಜ್ಯಶಾಸ್ತ್ರ ವಿಭಾಗದ ಅಧ್ಯಾಪಕಿ ಹಾಗೂ ಯುವ ಸಂಸತ್ ಕಾರ್ಯಕ್ರಮದ ಮಾರ್ಗದರ್ಶಕಿ ನಾಗವೇಣಿ.ವಿ.ಸರೋದೆ ತಿಳಿಸಿದ್ದಾರೆ.
ವಿದ್ಯಾರ್ಥಿಯ ಈ ಸಾಧನೆಗೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ, ಕುಲಸಚಿವರು (ಆಡಳಿತ) ಡಾ. ಚನ್ನಪ್ಪ.ಎ, ಕುಲಸಚಿವರು (ಮೌಲ್ಯಮಾಪನ) ಪ್ರೊ. ವಿರುಪಾಕ್ಷಯ್ಯ.ಡಿ.ಬಿ.ಎಂ, ಉಪಕುಲಸಚಿವ ಡಾ. ಜಿ.ಎಸ್.ಬಿರಾದಾರ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ. ವೆಂಕಟೇಶ್.ಕೆ ಸೇರಿದಂತೆ ವಿಭಾಗದ ಬೋಧಕ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ರಾಜ್ಯಮಟ್ಟದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ವಿಶ್ವವಿದ್ಯಾನಿಲಯಕ್ಕೆ ಮತ್ತಷ್ಟು ಗೌರವ ತರಲಿ ಎಂದು ಹಾರೈಸಿದ್ದಾರೆ.

Comments
Post a Comment