ಸಿ ಎಂ ಎನ್ ಬಾಲಕಿಯರ ಪ.ಪೂ.ಕಾಲೇಜಿನಲ್ಲಿ ೭೧ ನೇಯ ಕನ್ನಡ ರಾಜ್ಯೋತ್ಸವ ದಿನಾಚರಣೆ:
ಕರ್ನಾಟಕವು ಕಲೆ ಮತ್ತು ಜಾನಪದ ಸಂಸ್ಕೃತಿಯ ತವರು ಮನೆ- ವೆಂಕಟೇಶ ದೊಡ್ಡಮನಿ
ಜಯ ಧ್ವಜ ನ್ಯೂಸ್ ರಾಯಚೂರು ,ನ.1- ನಗರದ ತಾರನಾಥ ಶಿಕ್ಷಣ ಸಂಸ್ಥೆ (ರಿ) ರಾಯಚೂರು ಸಂಚಾಲಿತ ಚನ್ನಬಸಮ್ಮ ಎಂ ನಾಗಪ್ಪ ಬಾಲಕಿಯರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ರಾಯಚೂರು ವತಿಯಿಂದ ದಿನಾಂಕ ೧-೧೧-೨೦೨೬ ರಂದು ಬೆಳಿಗ್ಗೆ ೮.೦೦ ಗಂಟೆಗೆ ೭೧ನೇಯ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿAದ ಆಚರಿಸಲಾಯಿತು.
ಕಾಲೇಜಿನ ವಿದ್ಯಾರ್ಥಿನಿಯರಿಂದ ಕನ್ನಡಾಂಭೆ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಹೂವಿನ ಹಾರವನ್ನು ಹಾಕಿ ವಂದಿಸಿದರು. ಪ್ರಾಚಾರ್ಯರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಾಲೇಜಿನ ಉಪನ್ಯಾಸಕ ವರ್ಗದವರು ಮತ್ತು ವಿದ್ಯಾರ್ಥಿನಿಯರು ಪುಪ್ಪರ್ಚಾನೆ ಮಾಡಿ ವಂದಿಸಿ ಕನ್ನಡಾಂಭೆಗೆ ಜಯ ಘೋಷಣೆಗಳನ್ನು ಕೂಗಿದರು.
ಕಾಲೇಜಿನ ಪ್ರಾಚಾರ್ಯರಾದ ವೆಂಕಟೇಶ ದೊಡ್ಡಮನಿ ರವರು ಪ್ರತಿ ವರ್ಷದಂತೆ ನವೆಂಬರ್ ೧ ರಂದು ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ. ಸ್ವಾತಂತ್ರ್ಯ ಸಿಕ್ಕಾಗ ಭಾರತದಲ್ಲಿ ಹರಡಿಕೊಂಡಿದ್ದ ಕನ್ನಡಿಗರ ಪ್ರದೇಶಗಳು ಬೇರೆ ಬೇರೆ ಪ್ರಾಂತ್ಯಗಳ ಅಡಿಯಲ್ಲಿ ಹಂಚಿಹೋಗಿದ್ದವು. ಮೈಸೂರು, ಬಾಂಬೆ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಪ್ರಾಂತ್ಯ ಮತ್ತು ಕೊಡಗು ಹೀಗೆ ಚದುರಿಹೋಗಿದ್ದ ಕನ್ನಡ ನಾಡನ್ನು ಒಂದೇ ಆಡಳಿತದಡಿ ತರಲು ದಶಕಗಳ ಕಾಲ ಹೋರಾಟ ನಡೆಯಿತು. ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರ 'ಕರ್ನಾಟಕ ಗತವೈಭವ' ಕೃತಿಯು ಕನ್ನಡಿಗರಲ್ಲಿ ಕನ್ನಡದ ಜ್ಯೋತಿಯನ್ನು ಬೆಳಗಿಸಿತು. ೧೯೫೬ ರ ನವೆಂಬರ್ ೧ ರಂದು ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳು ಒಂದಾಗಿ ಮೈಸೂರು ರಾಜ್ಯ ಉದಯವಾಯಿತು. ನಂತರ ೧೯೭೩ ರಲ್ಲಿ ಇದಕ್ಕೆ 'ಕರ್ನಾಟಕ' ಎಂದು ಮರುನಾಮಕರಣ ಮಾಡಲಾಯಿತು. ನಮ್ಮ ಮಾತೃಭಾಷೆ ಕನ್ನಡವನ್ನು ಗೌರವಿಸುವುದು ನಮ್ಮ ಕರ್ತವ್ಯ. ಕರ್ನಾಟಕವು ಸುಂದರವಾದ ಪ್ರಕೃತಿ, ಶ್ರೀಮಂತ ಸಂಸ್ಕೃತಿ ಮತ್ತು ದೀರ್ಘ ಇತಿಹಾಸವನ್ನು ಹೊಂದಿರುವ ನಾಡು. ಕಾವೇರಿ, ಕೃಷ್ಣಾ, ತುಂಗೆ, ಭೀಮಾ, ಶರಾವತಿ ಮುಂತಾದ ನದಿಗಳು ಹರಿಯುವ ಈ ನಾಡು ಕವಿಗಳು, ಋಷಿಗಳು ಮತ್ತು ವೀರರ ತಪೋಭೂಮಿ. ನಮ್ಮ ಕನ್ನಡ ಭಾಷೆಗೆ ೮ ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಕನ್ನಡದಲ್ಲಿ ಮಾತನಾಡುವುದು ಮತ್ತು ಕನ್ನಡವನ್ನು ಉಳಿಸುವುದು ನಮ್ಮೆಲ್ಲರ ಹೊಣೆ.
ಕನ್ನಡ ಅತ್ಯಂತ ಪ್ರಾಚೀನ ಹಾಗೂ ಸವಿಯಾದ ಭಾಷೆ. ಪಂಪ, ರನ್ನ, ಕುಮಾರವ್ಯಾಸ, ಬಸವಣ್ಣ, ಕನಕದಾಸರು, ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರರAತಹ ಅನೇಕ ಮಹಾನ್ ಕವಿಗಳು ನಮ್ಮ ಕನ್ನಡ ನಾಡನ್ನು ಬೆಳಗಿಸಿದ್ದಾರೆ. 'ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು' ಎಂದು ಕುವೆಂಪು ಹೇಳಿದಂತೆ, ಕನ್ನಡ ನಮಗೆ ಕೇವಲ ಭಾಷೆಯಲ್ಲ. ಅದೊಂದು ಜೀವಭಾವ. ಕನ್ನಡವು ಬರಿ ನವೆಂಬರ್ ೧ಕ್ಕೆ ಮಾತ್ರ ಸೀಮಿತವಾಗ ಬಾರದು, ಅದು ನಮ್ಮ ದಿನನಿತ್ಯದ ಉಸಿರಾಗಬೇಕು. ನಾವು ಯಾವುದೇ ಭಾಷೆ ಕಲಿತರೂ, ನಮ್ಮ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡಲು ಎಂದಿಗೂ ಹಿಂಜರಿಯಬಾರದು. ಕನ್ನಡ ಪುಸ್ತಕಗಳನ್ನು ಓದೋಣ, ಕನ್ನಡದಲ್ಲಿ ಬರೆಯೋಣ ಮತ್ತು ಇತರರಿಗೂ ಕನ್ನಡವನ್ನು ಪ್ರೀತಿಯಿಂದ ಕಲಿಸೋಣ ಮತ್ತು ಕಲಿಸೋಣ.
ನಮ್ಮ ಕರ್ನಾಟಕವು ಕಲೆ ಮತ್ತು ಜಾನಪದ ಸಂಸ್ಕೃತಿಯ ತವರು ಮನೆ. ಯಕ್ಷಗಾನ, ಡೊಳ್ಳು ಕುಣಿತ, ಕಂಸಾಳೆ ಮತ್ತು ವೀರಗಾಸೆಯಂತಹ ಕಲಾಪ್ರಕಾರಗಳು ನಮ್ಮ ನಾಡಿನ ಶಕ್ತಿಯಾಗಿದೆ. ಇಂತಹ ವೈವಿಧ್ಯಮಯ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಯುವ ಪೀಳಿಗೆಯ ಜವಾಬ್ದಾರಿ. ನಮ್ಮ ಕಲೆ ಮತ್ತು ಭಾಷೆಯನ್ನು ಎತ್ತಿಹಿಡಿಯೋಣ ಎಂದು ಕರೆ ನೀಡಿದರು.
ಈ ಸಂಧರ್ಭದಲ್ಲಿ ಉಪನ್ಯಾಸಕರುಗಳಾದ ಸಲ್ಮಾ ಭಾನು, ರೇಣುಕಾ, ಶಿವಲೀಲಾ, ರಾಘಮ್ಮ, ಅನ್ನಪೂರ್ಣ, ವಿದ್ಯಾಶ್ರೀ, ಗೋವಿಂದರಾಜ್ ಎನ್, ಮಹೇಶ, ಚಿನ್ನಪ್ಪ ಭೀಮಣ್ಣ ಭಂಡಾರಿ, ಭೋದಕೇತರ ಸಿಬ್ಬಂದ್ದಿಯಾದ ಸಂಗಯ್ಯ ಸ್ವಾಮಿ, ರೋಹಿತ್, ಲಲಿತಮ್ಮ ಭಾಗ್ಯಮ್ಮ ಮತ್ತು ಕಾಲೇಜಿನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.


Comments
Post a Comment