ಎತ್ತಿನಗಾಡಿಯಲ್ಲಿ ಶಾಲೆಗೆ, ದೀಪದ ಬೆಳಕಿನಲ್ಲಿ ಓದು; ಸುಪ್ರೀಂ ಕೋರ್ಟ್‌ವರೆಗೆ ಸಾಧನೆಯ ಪಯಣ:

ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲರ ಆತ್ಮಕಥೆ ‘ಸಮಯ್, ಸಂಕಲ್ಪ ಔರ್ ಸಫರ್’ ಹಿಂದಿ ಆವೃತ್ತಿ ಬಿಡುಗಡೆ


ಜಯ ಧ್ವಜ ನ್ಯೂಸ್  ,ರಾಯಚೂರು ,ನ. 22-

ಎತ್ತಿನಗಾಡಿಯಲ್ಲಿ ಶಾಲೆಗೆ ತೆರಳಿ, ದೀಪದ ಬೆಳಕಿನಲ್ಲಿ ವಿದ್ಯಾಭ್ಯಾಸ ಮಾಡಿ, ಆರ್ಥಿಕ ಸಂಕಷ್ಟಗಳ ನಡುವೆಯೂ ಛಲದಿಂದ ಮುನ್ನಡೆದು ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಕರ್ನಾಟಕದ ಹೆಮ್ಮೆಯ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ ಅವರ ಜೀವನಗಾಥೆ ಇದೀಗ ಹಿಂದಿ ಭಾಷೆಯಲ್ಲೂ ಓದುಗರಿಗೆ ಲಭ್ಯವಾಗಿದೆ.

ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ ಅವರ ಆತ್ಮಕಥೆ ‘ಸಮಯ್, ಸಂಕಲ್ಪ ಔರ್ ಸಫರ್’ (Samay, Sankalp aur Safar) ಹಿಂದಿ ಆವೃತ್ತಿಯನ್ನು ನವೆಂಬರ್ 21ರಂದು ನವದೆಹಲಿಯ ದಿ ಒಬೆರಾಯ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಬಿಡುಗಡೆ ಮಾಡಿದರು.


ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಹಾಗೂ ಭಾರತೀಯ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರು ಆತ್ಮಕಥೆಯನ್ನು ಹಿಂದಿಗೆ ಅನುವಾದಿಸಿದ್ದಾರೆ.



ಮೂಲತಃ ಇಂಗ್ಲಿಷ್‌ನಲ್ಲಿ ‘ಟೈಮ್ ಸ್ಪೆಂಟ್, ಡಿಸ್ಟೆನ್ಸ್ ಟ್ರಾವೆಲ್ಡ್’ (Time Spent, Distance Travelled) ಹೆಸರಿನಲ್ಲಿ ಪ್ರಕಟವಾದ ಈ ಆತ್ಮಕಥೆ ನಂತರ ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಇದೀಗ ಹಿಂದಿ ಆವೃತ್ತಿಯ ಬಿಡುಗಡೆಯೊಂದಿಗೆ ದೇಶದ ಹೆಚ್ಚಿನ ಓದುಗರನ್ನು ತಲುಪುವಂತಾಗಿದೆ.

ಕರ್ನಾಟಕದ ಬರಪೀಡಿತ ಪ್ರದೇಶದ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಶಿವರಾಜ್ ವಿ. ಪಾಟೀಲ ಅವರು ಬಾಲ್ಯದಲ್ಲಿ ಶಿಕ್ಷಣ ಪಡೆಯಲು ಎದುರಿಸಿದ ಸವಾಲುಗಳು, ಎತ್ತಿನಗಾಡಿಯಲ್ಲಿ ದೂರದ ಶಾಲೆಗೆ ತೆರಳಿದ ದಿನಗಳು, ದೀಪದ ಬೆಳಕಿನಲ್ಲಿ ಓದಿದ ಅನುಭವಗಳು ಹಾಗೂ ಆರ್ಥಿಕ ಅಡಚಣೆಗಳ ನಡುವೆಯೂ ಶಿಕ್ಷಣದ ಮೇಲಿಟ್ಟಿದ್ದ ಬದ್ಧತೆಯನ್ನು ಆತ್ಮಕಥೆಯಲ್ಲಿ ಮನಮುಟ್ಟುವಂತೆ ದಾಖಲಿಸಿದ್ದಾರೆ.

ಅವರ ಬಾಲ್ಯದ ಹೋರಾಟದಿಂದ ಆರಂಭವಾಗುವ ಈ ಪಯಣ ಕಾನೂನು ಶಿಕ್ಷಣ, ವಕೀಲ ವೃತ್ತಿ, ಹೈಕೋರ್ಟ್‌ಗಳಲ್ಲಿನ ನ್ಯಾಯಾಂಗ ಸೇವೆ ಹಾಗೂ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಸಲ್ಲಿಸಿದ ಜವಾಬ್ದಾರಿಯುತ ಸೇವೆಯವರೆಗೆ ವಿಸ್ತರಿಸಿದೆ.

ನ್ಯಾಯಾಧೀಶರು ಕೇವಲ ಕಾನೂನಿನ ಜ್ಞಾನ ಹೊಂದಿದ್ದರೆ ಸಾಲದು, ಮೊದಲು ಉತ್ತಮ ಮನುಷ್ಯರಾಗಿರಬೇಕು. ಬಡ ಕಕ್ಷಿದಾರರ ನೋವು, ಸಂಕಷ್ಟಗಳನ್ನು ಅರ್ಥಮಾಡಿಕೊಳ್ಳುವ ಕರುಣೆ, ನೈತಿಕ ಮೌಲ್ಯಗಳು ಹಾಗೂ ನ್ಯಾಯದ ಬಗೆಗಿನ ಬದ್ಧತೆ ಪ್ರತಿಯೊಬ್ಬ ನ್ಯಾಯಾಧೀಶರಲ್ಲಿರಬೇಕು ಎಂಬ ಮಹತ್ವದ ಸಂದೇಶವನ್ನು ಕೃತಿ ಸಾರುತ್ತದೆ.

1940ರಲ್ಲಿ ಕರ್ನಾಟಕದ  ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲ್ದಕಲ್ ನಲ್ಲಿ ಜನಿಸಿದ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರು 1962ರಲ್ಲಿ ಗುಲ್ಬರ್ಗದಲ್ಲಿ ವಕೀಲ ವೃತ್ತಿ ಆರಂಭಿಸಿದರು. 1990ರಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು ನಂತರ ಮದ್ರಾಸ್ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದರು. 1999ರಲ್ಲಿ ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದರು. 2000ರ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡು 2005ರ ಜನವರಿಯಲ್ಲಿ ನಿವೃತ್ತರಾದರು.

ಸಾಮಾನ್ಯ ರೈತ ಕುಟುಂಬದಿಂದ ಆರಂಭವಾದ ಜೀವನದ ಪಯಣ ದೇಶದ ಅತ್ಯುನ್ನತ ನ್ಯಾಯಾಂಗ ಸಂಸ್ಥೆಯವರೆಗೆ ತಲುಪಿರುವುದು ಶಿಕ್ಷಣ, ಪರಿಶ್ರಮ, ಸಂಕಲ್ಪ ಮತ್ತು ಆತ್ಮವಿಶ್ವಾಸದ ಶಕ್ತಿಗೆ ಸಾಕ್ಷಿಯಾಗಿದೆ. ಯುವಜನರು, ಕಾನೂನು ವಿದ್ಯಾರ್ಥಿಗಳು, ವಕೀಲರು ಹಾಗೂ ನ್ಯಾಯಾಂಗ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬಯಸುವವರಿಗೆ ಈ ಆತ್ಮಕಥೆ ಪ್ರೇರಣೆಯ ಕೈಪಿಡಿಯಾಗಲಿದೆ.


ಕಾರ್ಯಕರ್ಮದಲ್ಲಿ ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ  ನ್ಯಾಯಮೂರ್ತಿ ಸಂಜೀವ್ ಖನ್ನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆತ್ಮಕಥೆಯ ಕರ್ತೃ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ ಅವರು ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು.

Comments

Popular posts from this blog