ವಂದೇ ಭಾರತ್ ಸ್ಲೀಪರ್ ರೈಲು ಸೇವೆಯಿಂದ ಕಲ್ಯಾಣ ಕರ್ನಾಟಕಕ್ಕೆ ಹೊಸ ವೇಗ; ಬಹುದಿನಗಳ ಬೇಡಿಕೆ ಈಡೇರಿಕೆ – ಬಾಬುರಾವ್
ಜಯ ಧ್ವಜ ನ್ಯೂಸ್ ,ರಾಯಚೂರು,ನ.2- ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಿಗೆ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು ಸೇವೆ ದೊರೆತಿರುವುದು ಈ ಭಾಗದ ಜನರಿಗೆ ಸಂತಸದ ಸಂಗತಿಯಾಗಿದೆ. ಬಹುದಿನಗಳಿಂದ ಈ ಭಾಗದ ಜನರು ನಡೆಸುತ್ತಿದ್ದ ಹೋರಾಟ ಹಾಗೂ ಬೇಡಿಕೆಗೆ ಕೊನೆಗೂ ಜಯ ಸಿಕ್ಕಿದೆ ಎಂದು ಬಾಬುರಾವ್ ಹೇಳಿದರು.
ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲಿನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ ರೈಲು ಗಂಟೆಗೆ 180 ಕಿಲೋಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಉನ್ನತ ದರ್ಜೆಯ ಹಾಗೂ ಹೈ ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡಿದೆ.ಉದ್ಯಾನ ಎಕ್ಸ್‌ಪ್ರೆಸ್ ರೈಲು ಸುಮಾರು 24 ಗಂಟೆಗಳ ಪ್ರಯಾಣದ ಅವಧಿ ತೆಗೆದುಕೊಂಡರೆ, ವಂದೇ ಭಾರತ್ ಸ್ಲೀಪರ್ ರೈಲು ಸುಮಾರು 16 ಗಂಟೆಗಳಲ್ಲಿ ಪ್ರಯಾಣ ಪೂರ್ಣಗೊಳಿಸಲಿದೆ . ಇದರಿಂದ ಪ್ರಯಾಣಿಕರಿಗೆ ಸಮಯ ಉಳಿತಾಯವಾಗುವುದರ ಜೊತೆಗೆ ಆರಾಮದಾಯಕ ಪ್ರಯಾಣದ ಅನುಕೂಲವೂ ದೊರೆಯಲಿದೆ ಎಂದು ಹೇಳಿದರು. ಇದೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಕಲ್ಯಾಣ ಕರ್ನಾಟಕದ ಜನರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.
ಮಾಜಿ ಸಂಸದ ರಾಜಾ ಅಮರೇಶ್ ನಾಯಕ ಮಾತನಾಡಿ ಈ ರೈಲು ಸೇವೆಯಿಂದ ಕಲ್ಯಾಣ ಕರ್ನಾಟಕ ಭಾಗದ ರೈಲ್ವೆ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದ್ದು, ವ್ಯಾಪಾರ, ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ, ಸಿಕಂದರಾಬಾದ್‌ನ ಡಿಆರ್‌ಎಂ ಗೋಪಾಲ ಕೃಷ್ಣ, ಸ್ಟೇಷನ್ ಮಾಸ್ಟರ್ ಅಶೋಕ ಕುಮಾರ್ ಮೀನಾ, ಓಂ ಪ್ರಕಾಶ್, ಹೇಮರಾಜ್,
ಬಸವರಾಜ್, ಮಾರೆಪ್ಪ, ಚಂದ್ರು, ಚಂದ್ರಶೇಖರ್, ಪಂಪನಗೌಡ, ದರೂರ ಬಸವರಾಜ್ ಸೇರಿದಂತೆ ರೈಲ್ವೆ ಪೊಲೀಸರು, ಸಿಬ್ಬಂದಿಗಳು ಹಾಗೂ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Comments
Post a Comment